ಅನುಗ್ರಹ

ದೇವರು ಮಾನವನಿಗೆ ತೋರುವ ಕೃಪೆ. ಅದರಂತೆ ಗುರು ಶಿಷ್ಯನಿಗೆ, ರಾಜ ಪ್ರಜೆಗೆ, ತಂದೆ ಮಗನಿಗೆ ತೋರುವ ಕೃಪೆಯೂ ಅನುಗ್ರಹವಾಗಬಲ್ಲದು. ಎಲ್ಲ ಆಸ್ತಿಕಮತದವರೂ ದೇವರ ಅನುಗ್ರಹವನ್ನು ನೆಚ್ಚಿರುತ್ತಾರೆ. ಕ್ರೈಸ್ತ ಧರ್ಮದಲ್ಲಿ ಮುಖ್ಯವಾಗಿ ರೋಮನ್ ಕ್ಯಾಥೊಲಿಕ್ ಪಂಥದಲ್ಲಿ ಅನುಗ್ರಹಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹಿಂದೂಧರ್ಮದಲ್ಲಿ ಕರ್ಮ ಮತ್ತು ಕೃಪೆಗಳನ್ನು ಸಮನ್ವಯಗೊಳಿಸುವ ಪ್ರಯತ್ನ ನಡೆದಿದೆ. ಕರ್ಮದ ಶೃಂಖಲೆಯನ್ನು ಬಿಡಿಸಿಕೊಳ್ಳಲು ದುರ್ಬಲಮಾನವನ ಪ್ರಯತ್ನ ಸಾಲದೆಂದು, ಭವವಂತನ ಅನುಗ್ರಹ ಬೇಕೆಂದು ತಿಳಿಸಿದ್ದಾರೆ. ಇದನ್ನೆ ವೈಷ್ಣವ ಹಾಗೂ ಶೈವಭಕ್ತರು ಅರುಳ್ ಎನ್ನುತ್ತಾರೆ. ಕನ್ನಡ ನಾಡಿನ ಶಿವಶರಣರೂ ಹರಿದಾಸರೂ ತಮ್ಮ ಕೀರ್ತನೆಗಳಲ್ಲಿ ದೇವರ ಅನುಗ್ರಹಕ್ಕೆ ಹಾತೊರೆಯುವುದನ್ನು ಕಾಣುತ್ತೇವೆ.
ದೇವರೆ ಕೃಪೆ ಎರಡು ವಿಧ : ಒಂದು ಮನುಷ್ಯನ ಪ್ರಯತ್ನವಿಲ್ಲದೆ ದೊರೆಯುವ ಕೃಪೆ; ಮತ್ತೊಂದು ಮನುಷ್ಯಯತ್ನಕ್ಕೆ ದೇವರು ತೋರಿಸುವ ಕೃಪೆ. ವೈಷ್ಣವ ದಾರ್ಶನಿಕರಲ್ಲಿ ಮಾರ್ಜಾಲ ಕಿಶೋರನ್ಯಾಯ ಮರ್ಕಟ ಕಿಶೋರನ್ಯಾಯ ಎಂಬ ವಾದಗಳಿವೆ. ಮಂಗನ ಮರಿ ಬದುಕಬೇಕಾದರೆ ತನ್ನ ತಾಯಿಯನ್ನು ಅಪ್ಪಿಕೊಳ್ಳಬೇಕು. ಹಾಗೆ ಜೀವಾತ್ಮರು ಪ್ರಯತ್ನ ಮಾಡಿದಾಗ ಮಾತ್ರ ಉದ್ಧಾರದ ಸಲುವಾಗಿ ಭಗವಂತ ಅನುಗ್ರಹ ನೀಡುತ್ತಾನೆ ಎಂಬುದೊಂದು ವಾದ. ಬೆಕ್ಕು ತನ್ನಮರಿಯನ್ನು ತಾನೆ ಎತ್ತಿಕೊಂಡು ಸ್ಥಳಾಂತರಿಸಿ ಸಲಹುವಂತೆ ಪರಮಾತ್ಮ ಜೀವಿಗಳನ್ನು ಉದ್ಧಾರ ಮಾಡಲು ತಾನೇ ಕೈಹಿಡಿದು ನಡೆಸುತ್ತಾನೆ ಎಂಬುದು ಇನ್ನೊಂದು ವಾದ. ಈ ರೀತಿಯ ವಿಭಿನ್ನವಾದಗಳು ಕ್ರೈಸ್ತಧರ್ಮದಲ್ಲೂ ಕಾಣಬರುತ್ತವೆ. ಇದನ್ನು ಪೆಲೇಜಿಯನ್ ವಾದ ಎನ್ನುತ್ತಾರೆ.
(ನೋಡಿ- ಪ್ರಪತ್ತಿ)
									
(ಜಿ.ಎಚ್.; ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ